ಕಾಣದನ್ನು ಅರಸಿ
July 4, 2007 at 4:33 am | In Uncategorized | Leave a Commentಬೆಟ್ಟದಲ್ಲಿ ಹುಟ್ಟಿದ ನಾನು
ಹೊಳೆಯಾಗಿ ಹರಿದು
ದೂರದಲ್ಲಿರುವ ಆ
ಕಾಣದ ಕಡಲ ಹಲುಬಿ
ಬಳಬಳನೆ ಪುಟಿದು ಹೊರಟೆ
ನನ್ನ ತವರು ಮೋಡದೂರು
ತೇಲುವ ಮುಗಿಲ ನಾಡು
ಹಸುರಸುರ ಮರಗಳ ಹಾಸು
ಅಲ್ಲಲ್ಲಿ ಸಣ್ಣಗೆ ಹರಿದು ನನ್ನ
ಸೇರುವ ತೊರೆಗಳ ಸಿಂಗಾರ
ಸಿಹಿ ನೀರ ತುಂಬಿಕೊಂಡು
ಬಯಲಿಗಿಳಿದ ನನ್ನ ಕಂಡು
ಎನಿತೋ ಮಂದಿ ಸಂತಸದಿಂದ
ಕುಡಿದು ಮಿಂದು ಅಣೆಕಟ್ಟಿ
ಪಯಿರ ಮೊಳಕಿಸಿ ನಲಿದರು
ನನ್ನ ಇನಿತು ಬಕುತಿಯಿಂದ
ಕಾಣುವ, ನಂಬಿರುವ ಈ
ಮಂದಿಯ ನಲಿವ ಕಂಡು
ನೆಮ್ಮದಿಯೆನಿಸಿದರೂ ಕಾಣದ
ಕಡಲ ಅರಸಿ ಮುಂದೋಡಿದೆ
ಹರಿದು ಹರಿದು ಬರಿದಾಗಿ
ಕೊನೆಗೆ ನನ್ನ ತುಂಬುಮೈ
ಯಿಳಿದು ಸಣ್ಣಸಣ್ಣಗಾಗಿ
ಹೆಜ್ಜೆಜ್ಜೆಗೂ ಬಲು ಹೆಣಗಿ
ಅಂತು ಇಂತು ಮುಟ್ಟಿದೆನು
ನನ್ನ ಆ ಕನಸಿನ ಕಡಲ
ಸೇರಿದೆನೆಂದು ಕುಣಿದು
ನಲಿದು ಸಂತಸ ಪಡಲು
ಈ ಅಬ್ಬರದ ಕಡಲಲ್ಲಿ ಏನಿದೇ?
ಬರೀ ಕಡು-ಉಪ್ಪು ಉಪ್ಪು!!
ಅವಳ ಆ ಹಾಡು
ಫೆಬ್ರವರಿ 21, 2007 at 7:22 pm | In Uncategorized | 4 Commentsನಾನೆದ್ದಿಹೆ ಈ ನಟ್ಟಿರುಳಿನಲ್ಲಿ
ಜೋಂಪೂ ಬಾರದು ಏಕೆ,
ಕಾಡುತಿಹುದು ಆ ಸವಿನೆನಪು,
ಒಲವ ಕಣ್ಣೋಟದ ಹೊಳಪು.
ಅವಳ ಆ ಕೆನ್ನೆಮುತ್ತು,
ಮುದ್ದು, ಆ ತೊಡೆದಿಂಬು,
ತಲೆಗೂದಲ ಸವರುವ,
ಆ ಕೈ, ಬಂಗಾರದ ಗೈ!
ಅವಳ ಮೊಗ ಎನಿತಂದ,
ಎನಿತು ಚೆಂದ ಅವಳ ನಗೆ
ಅವಳ ಆ ಕೊರಲಿಂಪು,
ಕಿವಿ-ಮನ ಎರಡಕ್ಕೂ ತಂಪು
ದಿನವೂ ಅವಳ ಆ ಹಾಡು,
ಒಂದೇ ರಾಗ ಒಂದೇ ತಾಳ
ಆದರೂ ದಿನವೂ ಹೊಸತು,
ಅರೆ! ಅದು ಹೇಗೆ? ತಿಳಿಯದು!
ಆ ಹಾಡು ಅದೇ ಹಾಡು,
ಎನಿತು ಸಲ ಮಲಗಿಸಿತ್ತು
ಚಂದಿರನ ಕನಸಿನರಮನೆಗೆ
ಮಲ್ಲಗೆ ಕಳುಹಿಸುತ್ತಿತು.
ಆದರೆ ಈ ನಡುರಾತ್ರಿಯೊಳು,
ಅದೇ ಸವಿನೆನೆಪು ಬಂದು,
ತನ್ನ ಹಳೆಯ ಬೆರಳುಗಳಿಂದ ಮುಟ್ಟಿ,
ಮೆಲ್ಲಗೆ ತಟ್ಟಿ ಎಬ್ಬಿಸುತ್ತಿದೆ
ಎಬ್ಬಿಸಿ, ಹಳೆಯ ಆದೇ, ಆ
ಮಲಗಿಸುವ ಹಾಡನ್ನೇ ಹಾಡಿ,
ತುಸು ಮಲಗಲು,
ಬಿಡದೇ ಕಾಡಿಸುತಿದೆ ಏಕೆ.
-ಮಹೇಶ
Blog at WordPress.com. | Theme: Pool by Borja Fernandez.
Entries and comments feeds.